
ಕನ್ನಡ ಚಿತ್ರಗಳಲ್ಲಿ ಲಾಂಗು ಮಚ್ಚು ಬಂದಾಗಿನಿಂದ ಚಿತ್ರಮಂದಿರದ ಕಡೆ ತಲೆ ಹಾಕಿ ಮಲಗುವದೇ ಅಪರೂಪವಾಗಿ ಬಿಟ್ಟಿತ್ತು. ಅಂತೂ ಬೆಳಗಿನಿಂದ ತಯಾರಿ ನಡೆದಿತ್ತು ನಮ್ಮ ಕೋಣೆಯಲ್ಲಿ ಎಲ್ಲರೂ ಸೂರ್ಯವಂಶಸ್ಥರಾದ್ರಿಂದ, ೪.೩೦ ರ ಪ್ರದರ್ಶನ ಎಂದು ನಿರ್ಧಾರ ಮಾಡಿದ್ವಿ. ಅಂತೂ ಎಲ್ಲ ತಯಾರಿ ಮಾಡಿ ಹೊರಟಾಗ ೩ ಘಂಟೆ ನಮ್ಮ ಬೆಮನಸಾ ನೂ ನಮ್ಮ ಮೆಲೆ ಮುನಿಸ್ಕೊಂಡಂಗೆ ಕಾಣ್ತಾ ಇತ್ತು ೨೦೧ ಗಳ ವರ್ಷ ಆಗ್ತಾ ಇತ್ತೇ ಹೊರತು ಒಂದೂ ಕೆಂ.ವಾ ನಿಲ್ದಾಣದ ಕಡೆಯ ಧೂಮ್ರಶಕಟಗಳು ಕಾಣಿಸ್ತಾ ಇರ್ಲಿಲ್ಲ. ಅಂತೂ ಮರಳುಗಾಡಿನಲ್ಲಿ ಓಯಸಿಸ್ ಸಿಗೋ ಥರಾ ಒಂದು ೨೫ ಬಂತು. ಇವತ್ತು ಕರಿಯ ಚೀಟಿಯೇ ಗತಿ ಅಂದ್ಕೊತಾ ಗಾಡಿ ಹತ್ತಿದ್ವಿ ಹಿಂದಿ ಚಿತ್ರಕ್ಕೆ ೧೮೦ ಕೊಡ್ಬೇಕಾದ್ರೆ ಕನ್ನಡ ಚಿತ್ರಕ್ಕೆ ೮೦ ಕೊಟ್ಟ್ರೆ ಯೇನು ಮೋಸ ಇಲ್ಲ ಎಂಬ ಸಮಾಧಾನ ಬೇರೆ. ಸಂತೋಷ್ ಚಿತ್ರಮಂದಿರಕ್ಕೆ ಕಾಲಿಟ್ಟಾಗ ಆಶ್ಚರ್ಯ!!!!!!!!!! ಬಾಲ್ಕನಿ ಚೀಟಿಯ ಸರದಿ ಖಾಲಿ ಹೊಡಿತಾ ಇತ್ತು ಆಯಪ್ಪನ್ನ ಹೋಗಿ ವಿಚಾರಿಸಿದ್ವಿ ಆಗ ಅವನು ೪.೩೦ ರದ್ದೇ ಅಂತ ಹೇಳಿ ೨ ಚೀಟಿ ಕೊಟ್ಟ. ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕಿದ್ದು ಅಂದ್ರೆ ಒಂದು ಒಳ್ಳೆಯ ಕನ್ನಡ ಚಿತ್ರಕ್ಕೆ ಸಿಗುವ ಪ್ರೋತ್ಸಾಹ ಇಷ್ಟೇನಾ??????????
ಈವಾಗ ಸೀದಾ ನನ್ನ ಅನಿಸಿಕೆಗೆ ಬರ್ತೀನಿ ನನ್ನ ಉದ್ದ ಪೀಠಿಕೆಗೆ ಕ್ಷಮಿಸಿ ನಂದು "ಉಂಡ್ಯಾ ಗೌಡಾ?? ಅಂದ್ರೆ ಮುಂಡಾಸ ಮೂವತ್ತು ಮೊಳ ಅನ್ನೋ ಜಾತಿ". ಚಿತ್ರ ತುಂಬಾನೆ ಚೆನ್ನಾಗಿದೆ ಒಂದು ಸುಂದರ ದ್ರುಶ್ಯ ಕಾವ್ಯ. ಬಿ.ಎಲ್.ವೇಣುರವರು ಪ್ರೇಮ ಕಥೆಯನ್ನು ತುಂಬಾ ಚೆನ್ನಾಗಿ ಹೆಣೆದಿದ್ದಾರೆ.ಚಿತ್ರದುರ್ಗದ ಮದಕರಿ ನಾಯಕನ ಕಾಲದಲ್ಲಿ ನಡೆದ ಈ ಕಥೆಗೆ ಉತ್ತರ ಕರ್ನಾಟಕದ ಭಾಷೆಯ ಸೊಗಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ ಆದರೆ ಎಲ್ಲೂ ಭಾಷೆಯ ಪ್ರೌಢಿಮೆಯನ್ನು ಕಡಿಮೆ ಮಾಡಿಲ್ಲೆ ನಮ್ಮ ನಿರ್ದೇಶಕರು ಸಾಹಿತ್ಯವೂ ಮನ ಮುಟ್ಟುತ್ತೆ.
ವಿಜಯ ರಾಘವೇಂದ್ರ ನಿಮ್ಮನ್ನು ಚಿತ್ರ ಪೂರ್ತಿ ಆವರಿಸುತ್ತಾರೆ ಅಷ್ಟು ಚೆನ್ನಾಗಿ ಅಭಿನಯ ಮಾಡಿದ್ದಾರೆ. ಮುಗ್ಧ ಹುಡುಗನಾಗಿ ಒಬ್ಬ ಪ್ರೇಮಿಯಾಗಿ ಮತ್ತು ದುರ್ಗದ ಸೇನಾನಿಯಾಗಿ ಎಲ್ಲ ರಸಗಳನ್ನೂ ನಿಮಗೆ ಬಡಿಸುತ್ತಾರೆ. ಕೇರಳದ ಬೆಡಗಿ ಉಮಾಶಂಕರಿಯ ಕಮಲ ನಯನದಲ್ಲಿ ಎಲ್ಲ ಭಾವನೆಗಳನ್ನು ತಿಳಿಸಿ ಮಾತು ಕಡಿಮೆ ಮಾಡಿರುವರು ಅದೂ ಉತ್ತಮವೇ.ಮತ್ತೆ ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರಲ್ಲಿ ಮದಕರಿಯ ಎಲ್ಲಾ ಗತ್ತು ಹೊರ ಹೊಮ್ಮುತ್ತೆ ಮತ್ತೆ ಸುಮಲತ ನಗುತಿರುವ ಶಾರದೆಯಾಗಿ ಅವರ ಪಕ್ಕ ನಿಲ್ಲುತ್ತಾಳೇ ಪೂರಾ ಚಿತ್ರದಲ್ಲಿ ಲೆಕ್ಕ ಮಾಡಿದ್ರೆ ಅವರ ಎರಡು ಸಂಭಾಷಣೆ ಸಿಗಬಹುದೇನೋ.ಅನಂತ್ ನಾಗ್ ಒಳ್ಳೆಯ ಅಭಿನಯ ನೀಡಿದ್ದಾರೆ ಒಂದೆರಡು ಹಾಸ್ಯ ಸನ್ನಿವೇಶಗಳಲ್ಲಂತೂ ಅನಂತ್ ಮತ್ತು ಭಾರತಿ ಮೆರೆಯುತ್ತಾರೆ.ಭಾರತಿ ಒಬ್ಬ ಮುಸ್ಲಿಮ್ ಹುಡುಗಿ ಶೈವರ ಮನೆಯಲ್ಲಿದ್ದಾಗ ಮನೆಯೊಡತಿಗಾಗುವ ತಳಮಳವನ್ನು ಬಹಳ ಚೆನ್ನಾಗಿ ಹೊರಹೊಮ್ಮಿಸಿರುವರು.ಇನ್ನು ದೇವರಾಜ್ ಅವರಿಗೆ ಹೆಚ್ಚಿಗೆ ಕಾಲಾವಕಾಶವಿಲ್ಲ ಆದರು ಸಾಧಾರಣ ಅನ್ನಿಸಿದರು.ಚಂದ್ರು ಅವರದ್ದು ಚಿಕ್ಕ ಪಾತ್ರವಾದರೂ ಚೊಕ್ಕ ಅಭಿನಯ ನೀಡಿದ್ದಾರೆ.
ಇನ್ನು ತಾಂತ್ರಿಕ ವರ್ಗ... ವೇಣುರವರ ಛಾಯಗ್ರಹಣ ನಿಮ್ಮ ಮನವನ್ನು ಸೆಳೆಯುತ್ತೆ.ದುರ್ಗದ ಕೋಟೆಯ ಮೇಲೆ ರವಿಯಾಡುವ ಬೆಳಕು ನೆರಳಿನಾಟಗಳನ್ನ ಬಹಳ ಸುಂದರವಾಗಿ ಸೆರೆ ಹಿಡಿದಿರುವರು.ಪ್ರತೀ ಚೌಕಟ್ಟಿನಲ್ಲು ದುರ್ಗ ಹೊಸ ಕನ್ಯೆಯಾಗಿ ಮೆರೆವಳು.ಇನ್ನ ಹಂಸಲೇಖ ಅವರ ಸಂಗೀತದ ಬಗ್ಗೆ ನಾ ಎನು ಹೆಳಲಿ???? ತಮ್ಮ ಸುಮಧುರ ಸಂಗೀತದಿಂದ ಎಂತಹ ಕಲ್ಲು ಹ್ರುದಯದಲ್ಲೂ ಹೂವನ್ನ ಅರಳಿಸ್ತಾರೆ.ನಾಗಾಭರಣರು ಈ ಹಡಗಿನ ಚುಕ್ಕಾಣಿ ಹಿಡಿದ ಮಹಾಪುರುಷರು.ಇದು ಒಂದು ಕಾಲ್ಪನಿಕ ಕಥೆ ಆದ್ರಿಂದ ತಮ್ಮ ಆಲೋಚನಾ ಲಹರಿಗೆ ಎಲ್ಲಿಯೂ ಕಟ್ಟೆಯನ್ನ ಕಟ್ಟಿಲ್ಲ. ಎಲ್ಲ ತರದ ರಸಗಳ ಒಂದು ಹದವಾದ ಮಿಶ್ರಣ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳೋದಾದ್ರೆ ಎಲ್ಲ್ರೂ ನೋಡ್ಬೇಕಾದ ಒಂದು ಉತ್ತಮ ಚಿತ್ರ. ಇಂತಹ ನಾಲ್ಕು ಚಿತ್ರಗಳು ಬಂದ್ರೆ ಮತ್ತೆ ನಮ್ಮ ಈ ಚಲನಚಿತ್ರೋದ್ಯಮ ಮತ್ತೆ ಸುವರ್ಣಯುಗಕ್ಕೆ ಮರಳುತ್ತೆ ಅಂತ ನನ್ನ ಅನಿಸಿಕೆ. ಮತ್ತೆ ಕಥೆ??????? ಅದನ್ನ ನಾ ಹೇಳೋಲ್ಲ ನೀವು ಚಿತ್ರ ಮಂದಿರಕ್ಕೆ ಹೋಗಿ ನೋಡಿ.....
1 comment:
ಚೆನ್ನಾಗಿದೆ
Post a Comment